ನೆತ್ತಲುಮೀನು

	ಕ್ಲೂಪಿಫಾರ್ಮಿಸ್ ಗಣದ ಕ್ಲೂಪಿಯಿಡೆ ಕುಟುಂಬಕ್ಕೆ ಸೇರಿದ ಮೀನು. ಇದರ ವೈಜ್ಞಾನಿಕ ಹೆಸರು ಸ್ಟೊಲಿಪೋರಸ್ ಕಮರ್‍ಸೋನಿಯೇನಸ್ ಅಥವಾ ಅಂಚೊವಿಲ್ ಕಮರ್‍ಸೋನಿ ಅಥವಾ ಎಂಗ್ರಾಲಿಸ್ ಕಮರ್‍ಸೋನಿಯೆನಸ್. ಭಾರತದಿಂದ ಮಲಯ ದ್ವೀಪ ಸಮುದಾಯಗಳ ಸಮುದ್ರಗಳಲ್ಲೆಲ್ಲ ಇದರ ವ್ಯಾಪ್ತಿಯುಂಟು. ಸಾಗರದಿಂದ ನದಿಮುಖಗಳನ್ನೇರಿ ಸ್ವಲ್ಪದೂರ ಒಳನಾಡಿನಲ್ಲೂ ಕಾಣಸಿಗುವುದಿದೆ. ಚಿಲ್ಕಾ ಸರೋವರದಲ್ಲೂ ಕಂಡುಬರುತ್ತವೆ. ಇದರ ಉದ್ದ ಸುಮಾರು 10 ಸೆಂಮೀ. ಮುಸುಡು ಚೂಪಾಗಿದ್ದು, ಮುಂದಕ್ಕೆ ಚಾಚಿ ಬಾಯಿಯ ಮೇಲೆ ತೂಗಾಡಿಕೊಂಡಿದೆ. ದೇಹದ ಬಣ್ಣ ಹೊಟ್ಟೆಯ ಭಾಗದಲ್ಲಿ ಬೂದುಮಿಶ್ರಿತ. ಈಜುರೆಕ್ಕೆಗಳು ಹಳದಿಬಣ್ಣದವು; ಸಣ್ಣ ಸಣ್ಣ ಕಪ್ಪು ಚುಕ್ಕೆಗಳಿಂದ ಕೂಡಿವೆ. ಬಾಲ ನೀಲಿಮಿಶ್ರಿತ. ಕಣ್ಣು ಬೆಳ್ಳಿಯಂತೆ ಹೊಳಪು; ಕಣ್ಣ ಸುತ್ತಲಿನ ಅಂಚು ಕಪ್ಪು.

	ನೆತ್ತಲು ಮೀನಿನ ಹಿಡುವಳಿ ಸುಮಾರು ಆಗಸ್ಟ್ ತಿಂಗಳಿಂದ ಡಿಸೆಂಬರ್‍ವರೆಗೆ ಕಂಡುಬರುತ್ತದೆ. ಕೆಲವೊಮ್ಮೆ ಪಶ್ಚಿಮ ಕರಾವಳಿಯಲ್ಲಿ ಮಳೆಗಾಲದಲ್ಲಿ ಕೂಡ ಈ ಮೀನನ್ನು ಕಾಣಬಹುದು. ಬಂಗುಡೆ, ಭೂತಾಯಿಗಳ ಸಂಖ್ಯೆ ಕಡಿಮೆ ಇದ್ದ ವರ್ಷಗಳಲ್ಲಿ ಇದು ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಪಶ್ಚಿಮ ಕರಾವಳಿಯಲ್ಲಿ ಹಂಗಾರುಕಟ್ಟೆ, ಮಂಗಳೂರು, (ದಕ್ಷಿಣ ಕನ್ನಡ), ಕ್ವಿಲಂಡಿ, ಕೋಜಿಕೋಡ್, ಪರಪುನಂಗಡಿ (ಮಲಬಾರು ಕರಾವಳಿ) ಮುಂತಾದವು ಮುಖ್ಯ ಇಳಿದಾಣ ಕೇಂದ್ರಗಳು. ಈ ಮೀನುಗಳು ಸಾಧಾರಣ ಗಾತ್ರದ ತೇಲುಜೀವಿಗಳನ್ನು, ಸಣ್ಣ ಸೀಗಡಿ ಮೀನುಗಳನ್ನು, ಕಠಿಣಚರ್ಮಿಗಳು-ಪಾಲಿಕೀಟಹುಳುಗಳನ್ನು, ಸಣ್ಣ ಮೀನುಗಳನ್ನು ತಿಂದು ಬದುಕುತ್ತವೆ. ಮೊಟ್ಟೆಯಿಡುವ ಕಾಲ ನವೆಂಬರ್‍ನಿಂದ ಮಾರ್ಚ್. ಇದರ ಮರಿಗಳನ್ನು ಎರೆಯಾಗಿ (ಬೇಟ್) ಒಡ್ಡಿ ಇತರ ಮೀನುಗಳನ್ನು ಹಿಡಿಯಲು ಯೂರೋಪಿಯನ್ನರು ಉಪಯೋಗಿಸುತ್ತಿದ್ದರು. ಆದ್ದರಿಂದಲೇ ಇದಕ್ಕೆ ವೈಟ್ ಬೇಟ್ ಎಂಬ ಇಂಗ್ಲಿಷ್ ಹೆಸರಿದೆ. ನೆತ್ತಲು ಮೀನು ಚೀನ, ಭಾರತ ದೇಶಗಳಲ್ಲಿ ಒಳ್ಳೆಯ ಆಹಾರವಾಗಿ ಬಳಸುತ್ತಾರೆ.
(ಎಂ.ಎ.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ